ತೀಯೊಫ್ರ್ಯಾಸ್ಟಸ್ -
	ಕ್ರಿ. ಪೂ. ಸುಮಾರು 371-287. ಅರಿಸ್ಟಾಟಲನ ತರುವಾಯ ಆತ ಸ್ಥಾಪಿಸಿದ ವಿದ್ಯಾಶಾಲೆ ಲೈಸಿಯಮ್ಮಿನ ಆಡಳಿತವನ್ನು ವಹಿಸಿಕೊಂಡ ಕ್ರಿ. ಪೂ. 322 ರಿಂದ 288ರ ವರೆಗೆ, ಎಂದರೆ ಸುಮಾರು 35 ವರ್ಷ, ಅದನ್ನು ಭರ್ಜತಿಯಾಗಿ ನೆರವೇರಿಸಿದವ. ಅದೇ ಶಾಲೆಯಲ್ಲಿ ಓದಿದ ಸಂಚಾಗಿ ಪಂಥದ ವಿದ್ವಾಂಸರಲ್ಲಿ ಪ್ರಮುಖ. ಈತ ಲೆಸ್ಬಾಸಿನವ. ಆತೆನಿಗೆ ಬಂದು, ಪ್ಲೇಟೋನ ಶಿಷ್ಯನಾಗಿದ್ದು, ಅವನ ಮರಣಾಂತರ ಅರಿಸ್ಟಾಟಲನ ಪರಿಚರ್ಯೆ ಪ್ರಾರಂಭಿಸಿದ, ಜ್ಞಾನಾರ್ಜನೆಯಲ್ಲಿ ಚುರುಕುತನ ತೋರಿಸಿ, ಬೇಗ ಗುರುವಿನ ಗಾಢ ಒಲುಮೆಗೆ ಪಾತ್ರನಾದ. ಬಹುಶಃ ಅವನೊಂದಿಗೆ ಸ್ಟಜೈರ ಮುಂತಾದ ಪ್ರದೇಶಗಳಿಗೆ ಹೋಗಿಬಂದ. ಕಡೆಯಲ್ಲಿ ಅರಿಸ್ಟಾಟಲ್ ಇವನಿಗೆ ವಿದ್ಯಾಶಾಲೆಯ ಉಸ್ತುವಾರಿಯನ್ನು ವಹಿಸಿಕೊಡುವುದಷ್ಟೇ ಅಲ್ಲದೆ, ಉಯಿಲು ಬರೆದು ಅವನನ್ನು ತನ್ನ ಮಕ್ಕಳಿಗೆ ಪೋಷಕನನ್ನಾಗಿ ನೇಮಿಸಿದ. ತನ್ನ ಗ್ರಂಥ ಭಂಡಾರವನ್ನೂ ತನ್ನ ಕೃತಿಗಳ ಹಸ್ತಪ್ರತಿಗಳನ್ನೂ ಇವನಿಗೇ ಕೊಟ್ಟ. ಅರಿಸ್ಟಾಟಲ್‍ನ ಇನ್ನೊಬ್ಬ ಶಿಷ್ಯ ರ್ಹೋಡ್ಸಿನ ಯೂಡಿಮಸ್ ; ಅವನನ್ನು ಕುರಿತೂ ಅರಿಸ್ಟಾಟಲ್‍ಗೆ ತುಂಬ ವಿಶ್ವಾಸ. ಇಬ್ಬರಲ್ಲಿ ಯಾರು ಉತ್ತರಾಧಿಕಾರಿಯಾಗಲು ಹೆಚ್ಚು ಅರ್ಹರು ಎಂಬುದನ್ನು ನಯವಾಗಿ ಆತ ಹೀಗೆ ಸೂಚಿಸಿದನಂತೆ; 'ಲೆಸ್ಟಾಸಿನ ಮದ್ಯವೂ ಅತ್ಯುತ್ಕøಷ್ಟ. ಲೆಸ್ಬಾಸಿನದು ಹೆಚ್ಚು ಸವಿ. ಅರಿಸ್ಟಾಟಲನ ನಂಬಿಕೆ ಯುಕ್ತವಾದದ್ದೆಂದು ತೀಯೊಫ್ರ್ಯಾಸ್ಟಸ್ ತನ್ನ ಶ್ರೇಷ್ಠ ಸೇವೆಯಿಂದ ಸಮರ್ಥಿಸಿದ. ಲೈಸೀಯಮ್ ಬಹಳ ಅಭಿವೃದ್ಧಿ ಹೊಂದಿತು; ವಿದ್ಯಾರ್ಥಿಗಳ ಸಂಖ್ಯೆ ಅಮಿತವಾಗಿ ಬೆಳೆಯಿತು ಕ್ಯಸಾಂಡರ್, ಟಾಕಮಿ ಇಬ್ಬರೂ ಇವನನ್ನು ಗೌರವಿಸಿದರು. ಇವನ ಮೇಲೆ ಅಸೂಯೆಗಾರರು ಒಡ್ಡಿದ ದೈವನಿಂದೆಯ ದೂರು ಹುರುಳಿಲ್ಲದ್ದೆಂದೂ ತೀರ್ಮಾನವಾಯಿತು. ತನ್ನ ಭಾರಿ ತೋಟವನ್ನೂ ಪಡಸಾಲೆಯುಳ್ಳ ಮಹಲನ್ನೂ ಲೈಸೀಯಮ್ಮಿನ ಬಡಾವಣೆಯಾಗಿರಲೆಂದು ಈತ ದತ್ತಿ ಬಿಟ್ಟ. ಈತ ಸತ್ತಾಗ ಏರ್ಪಡಿಸಿದ ಸಾರ್ವಜನಿಕ ಸಮಾಧಿ ಸಂಸ್ಕಾರದಲ್ಲಿ ಊರಿಗೆ ಊರೇ ಭಾಗವಹಿಸಿತ್ತು. 

	ಗುರುವಿನ ಹಾದಿಯಲ್ಲೇ ನಡೆದು ತೀಯೊಫ್ರ್ಯಾಸ್ಟನ್ ತರ್ಕ ಭೌತಶಾಸ್ತ್ರ ಜೀವಶಾಸ್ತ್ರ ಮನಶಾಸ್ತ್ರ ನೀತಿಶಾಸ್ತ್ರ ರಾಜ್ಯಶಾಸ್ತ್ರ ಅಲಂಕಾರಶಾಸ್ತ್ರ ತತ್ತ್ವಶಾಸ್ತ್ರ ಎಲ್ಲದರಲ್ಲೂ ಪ್ರವೀಣನಾದ. ಹೊಸದು ಹೇಳುವುದಕ್ಕೆ ಹೆಚ್ಚು ಲಕ್ಷ್ಯಗೊಡದೆ ಹೆಚ್ಚು ವಿವರಗಳನ್ನು ಸೇರಿಸುವ ಪ್ರಯತ್ನಕ್ಕೆ ಕೈಹಾಕಿದ. ವಸ್ತು ಸಂಗತಿಗಳ ಅವಲೋಕನವೂ ವೈಜ್ಞಾನಿಕ ಪರಿಶೀಲನೆಯೂ ಇವನಿಗೆ ಬಲಿ ಪ್ರಿಯವಾಗಿತ್ತು. ಈತ ಬಿಟ್ಟುಹೋಗಿರುವ ಗಿಡಗಳ ಚರಿತ್ರೆ, ಮತ್ತು ಗಿಡಗಳ ಹುಟ್ಟು ಎಂಬ 9 ಮತ್ತು 6 ಅಧ್ಯಾಯಗಳ ಗ್ರಂಥಗಳು ಈಚಿನವರೆಗೂ ಸಸ್ಯಶಾಸ್ತ್ರಕ್ಕೆ ಉತ್ತಮ ಕೊಡುಗೆ ಯೆಂಬ ಪ್ರಶಂಸೆಗೆ ತಕ್ಕುದಾಗಿದ್ದುವು. ಭೌತಶಾಸ್ತ್ರ ಚರಿತ್ರೆ. ಶಿಲೆಗಳು, ಸಂವೇದನೆ ಮೊದಲಾದ ಗ್ರಂಥಗಳ ಚೂರುಪಾರು ಉಳಿದು ಬಂದಿದೆ. 

	ತೀಯೊಫ್ರ್ಯಾಸ್ಟಸ್ಸನ್ ಹೆಸರು ಚಿರಸ್ಥಾಯಿಯಾಗಿರುವುದು ಮನುಷ್ಯರ ಲಕ್ಷಣಗಳು ಎಂಬ 30 ಅಧ್ಯಾಯಗಳ ಪುಸ್ತಕದಿಂದ. ಅಲಂಕಾರಶಾಸ್ತ್ರ ವಾಗ್ಮತೆಗಳಿಗೆ ಸಹಾಯಕವಾಗಿರಲೆಂದು ಅದನ್ನು ಈತ ರಚಿಸಿದಂತೆ ತೋರುತ್ತದೆ. ಭಾಷಣ ಕೇಳುವವರ ಸ್ವಾಭಾವವ್ಯತ್ಯಾಸ ಅಪೇಕ್ಷೆ ಅನಪೇಕ್ಷೆಗಳನ್ನು ಗಮನಕ್ಕೆ ತೆಗೆದುಕೊಳ್ಳದವ ಏನು ಭಾಷಣ ಮಾಡಿಯಾನು ? ತೀಯೊಫ್ರ್ಯಾಸ್ಟಸ್ಸನ್ ಅನುಸರಿಸಿದ ವಿಧಾನ ಒಂದು ರೀತಿಯ ನಕಾರ ಪದ್ಧತಿ ; ಎಲ್ಲರಿಗೂ ಸಮಯ ವಿವೇಕ ಅವಶ್ಯಕ. ಅದರ ವಿಷಯವನ್ನು ನೇರವಾಗಿ ವಿವರಿಸುವ ಬದಲು ಅದು ಇಲ್ಲದಿರುವ ವ್ಯಕ್ತಿಯ ಮನೋಭಾವವನ್ನೂ ಕೆಲಸಕಾರ್ಯಗಳನ್ನೂ ನಮೂದಿಸಿ ಆತ ಹೇಗೆ ತೊಂದರೆಗೆ ಈಡಾಗುತ್ತಾನೆಂದು ತೋರಿಸಿಕೊಡುತ್ತಾನೆ. ಮಾತಿನಲ್ಲಿ ಮಿತವಾಗಿರುವುದು ಒಳ್ಳೆಯದು; ವಾಚಾಳಿತನ ಕೆಟ್ಟುದು. ವಾಚಾಳಿಯ ಬಗೆಗೆ ವಿವರಣೆಯಿತ್ತು. ಅವನನ್ನು ಹೀಗೆ ಪರಿಹಾಸಗೈಯುತ್ತಾನೆಲ ; ' ಅವನ ಚಿಕ್ಕಮಕ್ಕಳು ಸಾಯಂಕಾಲ ಹಾಸಿಗೆಯಲ್ಲಿ ಮಲಗಿ ಹೀಗೆನ್ನುತ್ತಾರೆ: ಅಪ್ಪ, ಅಪ್ಪ ಒಂದು ಕಥೆ ಹೇಳು ; ನಮಗೆ ಬೇಗ ನಿದ್ದೆ ಬರುತ್ತದೆ.' ಇಂಥ ಹಿತಮಿತವಾದ, ಕಲೆಯೆಂದು ತೋರದ, ಸರಳ ಕಲೆಗಾರಿಕೆಯಲ್ಲಿ ತೀಯೊಫ್ರ್ಯಾಸ್ಟಸ್ ನಿಷ್ಣಾತ; ಜನರನ್ನು ಚೆನ್ನಾಗಿ ಬಲ್ಲವ ಹಾಗೂ ಗುಣಾವಗುಣವನ್ನು ಉತ್ಸಾಹದಿಂದಲೂ ಪೂರ್ತಿಯಾಗಿಯೂ ವರ್ಣಿಸಬಲ್ಲವ. 

	ರೀತಿಯ ಮೇಲೂ ಅಂಥದೇ ಇತರ ವಿಚಾರಗಳ ಮೇಲೂ ತೀಯೊಫ್ರ್ಯಾಸ್ಟಸ್ ಬರೆದಿದ್ದನಂತೆ; ಸಿಸಿರೊ ಅವನ್ನು ಓದಿದ್ದು ಕೆಲವು ವಾಕ್ಯಗಳನ್ನು ಉದ್ಧರಿಸಿದ್ದಾನೆ. ಆದರೆ ಅದಾವ ಬರೆಹವೂ ಉಳಿದುಬಂದಿಲ್ಲ. ಮುಂದೆ ಬಂದ ಲಾಕ್ಷಣಿಕರ ಹೇಳಿಕೆಗಳಿಂದ ಈತನ ಸಾಹಿತ್ಯ ತತ್ತ್ವಗಳನ್ನು ಪುನರ್ರಚನೆ ಮಾಡಬಹುದು. ಒಟ್ಟಿನಲ್ಲಿ ಇವನದ್ದೂ ಅರಿಸ್ಟಾಟಲನದ್ದೂ ಒಂದೇ ಮತ; ಆದರೂ ಕೆಲವಂಶಗಳಲ್ಲಿ ವಿಭಿನ್ನತೆ ಉಂಟು. ಭಾಷಣಕಾರನ ಸರಕು, ಅವನಿಗಿರಬೇಕಾದ ಸಾಮಾನ್ಯ ಜ್ಞಾನ, ಕೂಡುವಾಕ್ಯ ಸಡಿಲ ವಾಕ್ಯಕ್ಕಿಂತ ಒಳ್ಳೆಯದು; ರೂಪಲಕಾಂರದ ಅತಿಧೈರ್ಯವನ್ನು ಅಂತೆ, ಹಾಗೆ ಹೇಳಬಹುದಾದರೆ, ಇತ್ಯಾದಿ ಪದಗುಚ್ಚದಿಂದ ಕುಗ್ಗಿಸುವಿಕೆ; ಸಂಗೀತದ ಘನ ಪ್ರಯೋಜನ; ಶಬ್ದಗಳು ಸುಂದರವಾಗುವುದು ಅವುಗಳ ದನಿ ಅರ್ಥಸೂಚನೆಗಳಿಂದಲ ಸೂಕ್ತಿಗಳು ಸಮ್ಮತವಾಗುತ್ತವೆ; ಮೂರು ವಿಧದ ವಾಗ್ಮಿತೆ; ಭಾಷಣದ ನಾಲ್ಕು ಅಂಗಗಳು-ಇವು ಅರಿಸ್ಟಾಟಲಿನಲ್ಲಿ ಬರುವಂತೆ ತೀಯೊಫ್ರ್ಯಾಸ್ಟಸ್‍ನಲ್ಲೂ ಬರುತ್ತವೆ. 

	ಕೆಲವು ವಿಚಾರಗಳನ್ನು ಅವನಿಗಿಂತ ಇವನು ಹೆಚ್ಚು ಸ್ಪಷ್ಟಗೊಳಿಸಿದ್ದಾನೆ. ಗದ್ಯಲಯವನ್ನು ವಿಶದೀಕರಿಸಿದ್ದಾನೆ. ಕಾವ್ಯವನ್ನು ಪಠಿಸುವುದರಿಂದ ವಾಗ್ಮಿಗೆ ಆಗುವ ಉಪಯೋಗವನ್ನು ಹೆಚ್ಚು ಒತ್ತಿ ಹೇಳಿದ್ದಾನೆ. ಪದಗಳ ಆಯ್ಕೆಗೂ ಜೋಡಣೆಗೂ ಇರುವ ವ್ಯತ್ಯಾಸವನ್ನು ವಿವರವಾಗಿ ತೋರಿಸಿದ್ದಾನೆ. ಭಾಷಣಕಾರ ತತ್ತ್ವಜ್ಞನಂತೆ ಮಾತಾಡತಕ್ಕದ್ದು ಎಂದು ಅರಿಸ್ಟಾಟಲ್ ಸುಮ್ಮನಾದ. ಆದರೆ ತೀಯೊಫ್ರ್ಯಾಸ್ಟಸ್ ಪ್ರತಿಯೊಂದು ಭಾಷಣಕ್ಕೂ ಎರಡು ಅಂಶ - ವಿಷಯ ಮತ್ತು ಆಕಾರಲ ತತ್ತ್ವಜ್ಞನ ದೃಷ್ಟಿ ಮೊದಲನೆದರ ಮೇಲೆ; ಭಾಷಣಕಾರನ ದೃಷ್ಟಿ ಎರಡನೆಯದರ ಮೇಲೆ, ಏತಕ್ಕೆಂದರೆ ಅವನಿಗೆ ಶ್ರೋತೃಗಳನ್ನು ಒಪ್ಪುವಂತೆ ಮಾಡುವುದು ಮುಖ್ಯೋದ್ದೇಶ — ಎಂದು ಹೇಳಿದ. 

	ಅರಿಸ್ಟಾಟಲ್ ಭಾಷೆಯ ಪರಿಶುದ್ಧಿಯನ್ನು ಚರ್ಚಿಸುತ್ತ ಸ್ಪಷ್ಟತೆ ಅಥವಾ ತಿಳಿತನ ರೀತಿಯ ಮುಖ್ಯ ಗುಣ ಎಂದು ಹೇಳಿದ. ತೀಯೊಫ್ರ್ಯಾಸ್ಟಸ್ ಮುಂದೆ ನಡೆದು ರೀತಿಯ ನಾಲ್ಕು ಗುಣ ಮತ್ತು ಶೈಲಿಯ ಮೂರು ಬಗೆ ಎಂಬ ಅಭಿಪ್ರಾಯದ ಜನಕನಾದನೆಂಬ ನಂಬಿಕೆ ಇತ್ತು. ಮುಂದಣ ಅಲಂಕಾರಿಕರೆಲ್ಲರಿಗೂ ಹೆಚ್ಚು ಕಡಿಮೆ ಅದೊಂದು ಗೃಹೀತ ತತ್ತ್ವ. ಪರಿಶುದ್ಧಿ, ತಿಳಿತನ, ಔಚಿತ್ಯ ಮತ್ತು ಅಲಂಕಾರ — ಇವು ರೀತಿಯ ಗುಣವಿಶೇಷ. ಭವ್ಯ, ಸರಳ, ಶಕ್ತ ಇವು ಮೂರೂ ಶೈಲಿಯ ಬಗೆ; ತೀಯೊಫ್ರ್ಯಾಸ್ಟಸ್ ತನ್ನ ಅಭಿಪ್ರಾಯಗಳನ್ನು ನಿಸ್ಸಂದಿಗ್ಧವಾಗಿಯೂ ಸಾಕಷ್ಟು ವಿವರಗೂಡಿಯೂ ಒರೆಯುತ್ತಾನೆ. ಆದರೆ ಅರಿಸ್ಟಾಟಲಾಗಲಿ ತೀಯೊಫ್ರ್ಯಾಸ್ಟಸಾಗಲಿ ಅಂಶಗಳನ್ನು ಕೂದಲೆಳೆಯಂತೆ ಕತ್ತರಿಸುವುದನ್ನೂ ಎಳೆಯೊಂದೊಂದಕ್ಕೂ ಒಂದು ಪಾರಿಭಾಷಿಕ ಅಂಕಿತವನ್ನು ಇಡುವುದನ್ನೂ ಅರಿತಿರಲಿಲ್ಲ; ಅಭ್ಯಾಸ ಮಾಡಿರಲಿಲ್ಲ. ಹೆಲನಿಸ್ಟಿಕ್ ಅವಧಿಯ ಲಾಕ್ಷಣಿಕರಿಗೆ ಅದೇ ಆಸಕ್ತ ಕೃಷಿ; ಅವರಿಂದ ಆ ವಾಡಿಕೆ ರೋಮನರಿಗೆ ರೂಢಿಯಾಯಿತು. ನಾಲ್ಕು ರೀತಿ, ಮೂರು ಶೈಲಿ- ಎಂಬುದು ಎದ್ದುಬಂದದ್ದು ಅವರ ಕಾಲದಲ್ಲಿ. ಅರಿಸ್ಟಾಟಲನ ಹಿಂಬಾಲಕ, ಭಾಷ್ಯಕಾರ, ಸಂಶಯ ನಿವಾರಕ — ಎಂಬ ಮನ್ನಣೆ ಮಾತ್ರ ತೀಯೊಫ್ರ್ಯಾಸ್ಟಸನಿಗೆ ಸಲ್ಲುತ್ತದೆ. 		 	(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ